ಫ್ಯಾರಡೆ, ಮೈಕಲ್
1791―1867. ಇಂಗ್ಲೆಂಡಿನ ಭೌತವಿಜ್ಞಾನಿ ಮತ್ತು ರಸಾಯನವಿಜಾÐನಿ. ಜನನ 22-9-1791, ಮರಣ 25-8-1867. ಜೀವಂತ ಪ್ರತಿಭೆ ಪರಿಸರದ ಎಂಥ ಪ್ರತಿಕೂಲ ಸನ್ನಿವೇಶಗಳನ್ನೂ ಎದುರಿಸಿ ತನ್ನ ಅಸ್ತಿತ್ವವನ್ನು ಪ್ರದರ್ಶಿಸಬಲ್ಲದು ಎನ್ನುವುದಕ್ಕೆ ನಿದರ್ಶನ ಫ್ಯಾರಡೆ. ವಿದ್ಯುತ್ತಿನ ವಿವಿಧ ಲಾಸ್ಯಗಳ ಜೊತೆ ನಿಕಟವಾಗಿ ಹೆಣೆದುಹೋಗಿದೆ ಈತನ ಹೆಸರು: ವಿದ್ಯುತ್ಕಾಂತ ಪ್ರೇರಣೆ (ಎಲೆಕ್ಟ್ರೊಮ್ಯಾಗ್ನೆಟಿಕ್ ಇಂಡಕ್ಯನ್), ವಿದ್ಯುದ್ವಿಶ್ಲೇಷಣೆಯ ನಿಯಮಗಳು (ಲಾಸ್ ಆಫ್ ಎಲೆಕ್ಟ್ರೊಲಿಸಿಸ್), ಬೆಳಕಿಗೂ ಕಾಂತ ಕ್ಷೇತ್ರಕ್ಕೂ ಇರುವ ಮೂಲ ಸಂಬಂಧ, ವಿದ್ಯುತ್ಕಾಂತ ಕ್ಷೇತ್ರದ ಆಧುನಿಕ ವಾದಕ್ಕೆ ಸಂಬಂಧಿಸಿದ ಮೂಲ ಅಭಿಪ್ರಾಯಗಳು ಇತ್ಯಾದಿ ಫ್ಯಾರಡೆಯ ವಿಶಿಷ್ಟ ಕೊಡುಗೆಗಳು.

	ಕಮ್ಮಾರನ ಹತ್ತು ಮಕ್ಕಳ ಪೈಕಿ ಒಬ್ಬನಾದ ಫ್ಯಾರಡೆಗೆ ಸಾಂಪ್ರದಾಯಿಕ ಪ್ರಾಥಮಿಕ ಶಿಕ್ಷಣ ಕನಸಿನ ಕಲ್ಪನೆ ಆಗಿತ್ತು. ದುಡಿಮೆ ಹೊಟ್ಟೆಪಾಡು ಎರಡೇ ಬದುಕಿನ ಘನ ಆದರ್ಶ ಉದ್ದೇಶಗಳಾಗಿದ್ದುವು. ಪುಸ್ತಕ ರಟ್ಟುಗಾರನೊಡನೆ ಚಿಲ್ಲರೆ ಸಹಾಯಕನಾಗಿ ಸೇರಿಕೊಂಡ. ರಟ್ಟುಕಟ್ಟಲು ಮತ್ತು ಇತರ ಬಗೆಯ ದುರಸ್ತಿ ಮಾಡಲು ಅಂಗಡಿಗೆ ಬರುತ್ತಿದ್ದ ಕಚ್ಚಾಸಾಮಗ್ರಿಗಳೊಡನೆ ಯಾಂತ್ರಿಕವಾಗಿ ನಡೆಸಬೇಕಾಗಿದ್ದ ವ್ಯವಹಾರದಲ್ಲಿ ತರುಣ ಫ್ಯಾರಡೆ ಹೊಸ ಬೆಳಕುಕಂಡ: ಪುಸ್ತಕಗಳ ಬಾಹ್ಯ ಸೌಂದರ್ಯವರ್ಧನೆಯತ್ತ ಗಮನ ಹರಿಸುತ್ತಿದ್ದಂತೆ ಅಂತರಂಗ ಸೌಂದರ್ಯವನ್ನು ಸಾಧ್ಯವಾದಾಗಲೆಲ್ಲ, ಸಾಧ್ಯವಾಗುವಷ್ಟರ ಮಟ್ಟಿಗೆ, ಆಸ್ವಾದಿಸುತ್ತಿದ್ದ. ಅಂಗಡಿ ಮಾಲಿಕ ಕೂಡ ಈ ಎಳೆಯನ ಜ್ಞಾನದಾಹವನ್ನು ಸಹಾನುಭೂತಿಯಿಂದ ಕಂಡು ಈತನ ಖಾಸಗಿ ವ್ಯಾಸಂಗವನ್ನು ಪ್ರೋತ್ಸಾಹಿಸಿದ. ಇಷ್ಟೇ ಅಲ್ಲ. ಸಾರ್ವಜನಿಕ ವೈಜ್ಞಾನಿಕ ಭಾಷಣಗಳು ನಡೆಯುತ್ತಿದ್ದೆಡೆಗಳಿಗೆ ಹೋಗಿ ಅವನ್ನು ಆಲಿಸಲು ಅನುಮತಿಯನ್ನೂ ನೀಡಿದ.

	1812ನೆಯ ಇಸವಿಯಲ್ಲಿ ಒಬ್ಬ ಗಿರಾಕಿ ಫ್ಯಾರಡೆಗೆ, ವಿಖ್ಯಾತ ರಸಾಯನವಿಜ್ಞಾನಿ ಹಂಫ್ರೀ ಡೇವಿ (1778-1829), ಆಗ ಕೊಡುತ್ತಿದ್ದ ಜನಪ್ರಿಯ ವಿಜ್ಞಾನ ಭಾಷಣಗಳಿಗೆ ಹಾಜರಾಗಲು ಟಿಕೆಟ್ ನೀಡಿದ. ರಾಯಲ್ ಇನ್‍ಸ್ಟಿಟ್ಯೂಷನ್ನಿನಲ್ಲಿ ನಡೆದ ಡೇವಿಯ ಭಾಷಣಗಳನ್ನು ಆಲಿಸಿದ ಫ್ಯಾರಡೆ ಅವುಗಳಿಂದ ಪ್ರಭಾವಿತನಾದ. ಆ ಭಾಷಣಗಳ ಟಿಪ್ಪಣಿಗಳನ್ನು ಬರೆದು ಅವುಗಳ ಸಮೇತ ಡೇವಿಗೆ ಕೆಲಸದ ಅರ್ಜಿ ಸಲ್ಲಿಸಿದ ಈ ಹೊಸಬನ ಶ್ರದ್ಧಾಸಕ್ತಿ ಮೆಚ್ಚಿದ ಡೇವಿ ಇವನನ್ನು ತನ್ನ ಸಹಾಯಕನಾಗಿ ನೇಮಿಸಿಕೊಂಡ. ಆಗ ಫ್ಯಾರಡೆಯ ವಯಸ್ಸು ಇಪ್ಪತ್ತೊಂದು. ಮುಂದೆ ಡೇವಿ ಯೂರೊಪ್ ಪ್ರವಾಸ ಮಾಡಿದಾಗ ಫ್ಯಾರಡೆ ಅವನ ಜೊತೆಗಿದ್ದು ಪರಿಚಾರಕನಂತೆ ಕೂಡ ಕೆಲಸ ಮಾಡಬೇಕಾಯಿತು. ಆದರೆ ಆ ಸಂದರ್ಭದಲ್ಲಿ ಅನೇಕ ಸಂಶೋಧಕರನ್ನು ನೋಡುವ ಅವಕಾಶ ದೊರೆತು ಇವನ ದೃಷ್ಟಿ ವಿಶಾಲವಾಗಲು ಅವಕಾಶ ಒದಗಿತು.

	1816ರಲ್ಲಿ ಫ್ಯಾರಡೆಯ ಮೊದಲನೆಯ ಸಂಶೋಧನ ಪ್ರಬಂಧ ಪ್ರಕಟವಾಯಿತು. ಆದರೆ ಅದು ಅಷ್ಟೇನೂ ಮಹತ್ತ್ವದ್ದಾಗಿರಲಿಲ್ಲ. ತುಕ್ಕು ಹಿಡಿಯದಿರುವ ಉಕ್ಕನ್ನು ತಯಾರಿಸಲು ಫ್ಯಾರಡೆ ಬಹುವಾಗಿ ಶ್ರಮಿಸಿದ. ಆದರೆ ಹಲವು ಲೋಹಗಳ ಮಿಶ್ರಣದಿಂದ ಅವುಗಳ ಗುಣ ವಿಶೇಷಗಳಲ್ಲಿ ಉಂಟಾದ ಬದಲಾವಣೆಯ ಹೊರತು ಹೆಚ್ಚು ಮುಖ್ಯವಾದ ವಿಷಯ ಏನೂ ಪತ್ತೆಯಾಗಲಿಲ್ಲ. 1820ರಲ್ಲಿ ಆ ತನಕ ತಿಳಿಯದಿದ್ದ ಎರಡು ಇಂಗಾಲದ ಕ್ಲೋರೈಡುಗಳನ್ನೂ ಅಯೋಡೀನ್, ಇಂಗಾಲ ಮತ್ತು ಹೈಡ್ರೊಜನ್ ಸೇರಿದ ಹೊಸ ಸಂಯುಕ್ತವನ್ನೂ ಪತ್ತೆಹಚ್ಚಿದ. ಅದೇ ವರ್ಷ ಎಸ್ರ್ಟಡ್ ಎಂಬ ವಿಜ್ಞಾನಿ (1777-1851)ತಂತಿಯಲ್ಲಿ ವಿದ್ಯುತ್ ಪ್ರವಹಿಸಿದಾಗ ಹತ್ತಿರದಲ್ಲಿರುವ ಕಾಂತಸೂಚಿ ದಿಕ್ಪಲ್ಲಟ ಹೊಂದುತ್ತದೆ ಎಂಬ ಸಂಶೋಧನೆ ಪ್ರಕಟಿಸಿದ. ತಂತಿಯ ಸುತ್ತ ಕಾಂತಕ್ಷೇತ್ರ ವರ್ತುಲಾಕಾರದಲ್ಲಿಬೇಕೆಂದು ಫ್ಯಾರಡೆ ಗ್ರಹಿಸಿದ. ಇದೇ ಆಧಾರದ ಮೇಲೆ ತನ್ನ ಮೊತ್ತಮೊದಲನೆಯ ಅತ್ಯಂತ ಮಹತ್ತ್ವದ ಸಂಶೋಧನೆ ಮಾಡಿದ. ಲಾಳಾಕಾರದ ಕಾಂತದ ಧ್ರುವಗಳ ನಡುವೆ ವಿದ್ಯುತ್ ಪ್ರವಹಿಸುವ ಒಂದು ಲೋಹನ ಸುರುಳಿ ತಿರುಗುತ್ತದೆ ಎಂದು ತೋರಿಸಿದ. ಈ ಸಂಶೋಧನೆಯಿಂದ ಅವನಿಗೆ ಅಪಾರ ಕೀರ್ತಿ ದೊರೆಯಿತು.

	1823ರಲ್ಲಿ ಫ್ಯಾರಡೆ ಕ್ಲೋರೀನ್ ಅನಿಲದ ದ್ರವೀಕರಣ ಸಾಧಿಸಿದ. ಇದರಿಂದ ಡೇವಿಯಲ್ಲಿ ಅಸೂಯೆ ಬುಸುಗುಟ್ಟಿತು. ಏಕೆಂದರೆ ಅದನ್ನೇ ಮಾಡಲು ಇವನಾದರೂ ಬಹಳ ಹೆಣಗುತ್ತಿದ್ದ. ಈ ಕಾರಣದಿಂದ ಡೇವಿ ರಾಯಲ್ ಸೊಸೈಟಿಗೆ ಫ್ಯಾರಡೆಯ ಉಮೇದುವಾರಿಕೆಯನ್ನು ಕೂಡ ವಿರೋಧಿಸಿದ. ಆದರೂ 1824ರಲ್ಲಿ ಫ್ಯಾರಡೆಯ ಆಯ್ಕೆ ನಡೆದೇ ನಡೆಯಿತು. 1825ರಲ್ಲಿ ತೈಲಾನಿಲದಿಂದ ಬೆನ್‍ಸೀನ್ ಎಂಬ ವಸ್ತುವನ್ನು ಪ್ರತ್ಯೇಕಿಸುವ ಮುಖ್ಯ ವಿಧಾನ ಶೋಧಿಸಿದ. ಇದೇ ವೇಳೆ ಗಾಜಿಗೆ ಸಂಬಂಧಿದಂತೆ ಹಲವು ಸಂಶೋಧನೆ ಮಾಡಿ ಭಾರಗಾಜು ಎಂಬುದನ್ನು ಶೋಧಿಸಿದ. 1825ರಲ್ಲಿ ಇವನ ಸ್ಥಾನಮಾನ ಹೆಚ್ಚಿ ರಾಯಲ್ ಇನ್‍ಸ್ಟಿಟ್ಯೂಷನ್ನಿನಲ್ಲಿಯ ಪ್ರಯೋಗಶಾಲೆಯ ನಿರ್ದೇಶಕನಾಗಿ ನೇಮಕಗೊಂಡ. ಅಲ್ಲಿ ಸದಸ್ಯರುಗಳಿಗೆ ಪ್ರತಿ ಶುಕ್ರವಾರ ಭಾಷಣಮಾಡುವ ಒಂದು ಕ್ರಮ ಏರ್ಪಡಿಸಿದ. ಈ ಭಾಷಣಗಳು ಅತ್ಯಂತ ಪಾಂಡಿತ್ಯಪೂರ್ಣವಾಗಿಯೂ ಈತ ರೂಪಿಸಿದ ಪ್ರಯೋಗಗಳು ಅತ್ಯಂತ ಕುತೂಹಲಕಾರಿಯಾಗಿಯೂ ಇರುತ್ತಿದ್ದುವು. 

	1831ರಿಂದ ಫ್ಯಾರಡೆಯ ವಿಜ್ಞಾನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಯಿತೆನ್ನಬಹುದು. ಪ್ರಕೃತಿಯ ಶಕ್ತಿಗಳೆಲ್ಲ ಪರಸ್ಪರ ನಿಕಟ ಸಂಬಂಧ ಹೊಂದಿವೆ ಎಂದು ಇವನಿಗೆ ಅನ್ನಿಸಿತ್ತು. ವಿದ್ಯುತ್ಪ್ರವಾಹದಿಂದ ಕಾಂತಕ್ಷೇತ್ರವೇರ್ಪಡುತ್ತದೆ. ಅದೇ ರೀತಿ ಕಾಂತತ್ವದಿಂದ ವಿದ್ಯುತ್ಪ್ರವಾಹವುಂಟಾಗಬಹುದು ಎಂದು ಇವನ ಮನಸ್ಸಿಗೆ ಖಚಿತವಾಗಿತ್ತು. 1822ರಲ್ಲೇ ಇವನು ತಂತಿಗಳ ಸುರುಳಿಗಳ ಸಮೀಪದಲ್ಲಿ ಕಾಂತ ಇಟ್ಟು ಪ್ರವಾಹವನ್ನು ಉತ್ಪಾದಿಸಲು ಪ್ರಯತ್ನಿಸಿದ್ದ. 1831ರಲ್ಲಿ ಸತತವಾಗಿ ಹತ್ತು ದಿವಸ ಪರ್ಯಂತ ಅವಿಶ್ರಾಂತವಾಗಿ ಪ್ರಯೋಗ ನಡೆಸಿ, ಕಾಂತಕ್ಷೇತ್ರ ವ್ಯತ್ಯಾಸದಿಂದ ಪ್ರವಾಹ ಸಾಧ್ಯವೆಂದು ಪತ್ತೆಮಾಡಿದ. ವಿದ್ಯುತ್ಕಾಂತ ಪ್ರೇರಣೆಗೆ (ಎಲೆಕ್ಟ್ರೊಮ್ಯಾಗ್ನೆಟಿಕ್ ಇಂಡಕ್ಶನ್) ಸಂಬಂಧಿಸಿದ ಆ ಪ್ರಯೋಗಗಳು ಎಷ್ಟು ಮುಖ್ಯವೆಂದರೆ ಅವನು ಮಾಡಿದ ದಿನಾಚರಣೆಯನ್ನು ಈಗಲೂ ಲಂಡನ್ನಿನಲ್ಲಿ ಇನ್‍ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಆಶ್ರಯದಲ್ಲಿ ಪ್ರತಿವರ್ಷವೂ ನಡೆಸಲಾಗುತ್ತಿದೆ.

	ಮೊದಲನೆಯ ವಿದ್ಯುದುತ್ಪಾದಕ ಯಂತ್ರಕ್ಕೆ (ಡೈನಮೊ) ಫ್ಯಾರಡೆಯೇ ಕಾರಣ ಎಂದು ಹೇಳಬಹುದು. ದೊಡ್ಡದೊಂದು ಕಾಂತದ ಧ್ರುವಗಳ ನಡುವೆ ತಾಮ್ರದ ತಟ್ಟೆಯನ್ನು ತಿರುಗಿಸಿದಾಗ ಅದರ ಅಕ್ಷದಿಂದ ಅಂಚಿನ ಕಡೆಗೆ ಒಂದು ವಾಹಕದಲ್ಲಿ ವಿದ್ಯುತ್ತು ಪ್ರವಹಿಸುವುದನ್ನು ಈತ ಪ್ರಯೋಗದಿಂದ ತೋರಿಸಿದ. ಹೀಗೆಯೇ ಪ್ರಯೋಗ ನಡೆಸುತ್ತ ಒಂದು ವಿದ್ಯುನ್ಮಂಡಲದಲ್ಲಿ ಪ್ರವಹಿಸುವ ವಿದ್ಯುತ್ ಹತ್ತಿರದ ಇನ್ನೊಂದು ಮಂಡಲದಲ್ಲಿ ಪ್ರವಾಹವನ್ನು ಪ್ರೇರಿಸಬಲ್ಲದು ಎಂಬುದನ್ನೂ ತೋರಿಸಿದ. ಇವನ ಅಭಿಪ್ರಾಯಗಳನ್ನು ಸ್ಪಷ್ಟಪಡಿಸುವುದಕ್ಕೆ ಕಾಂತ ಬಲರೇಖೆಗಳು ಎಂಬ ಹೊಸ ವಿಷಯವನ್ನು ಮಂಡಿಸಿದ. ಇದೇ ರೀತಿ ಸ್ಥಿರ ವಿದ್ಯುತ್ತಿನಲ್ಲಿ ಸಂಶೋಧನೆ ನಡೆಸುತ್ತಿದ್ದಾಗ ವಿದ್ಯುತ್ ಬಲರೇಖೆಗಳು ಎಂಬ ಭಾವನೆ ಉಪಯೋಗಿಸಿಕೊಂಡು ವಿಷಯವನ್ನು ವಿವರಿಸಿದ. ಈ ದಿಶೆಯಲ್ಲಿ ಇವನು ನಡೆಸಿದ ಮೂಲ ಸಂಶೋಧನೆಗಳ ಸ್ಮರಣಾರ್ಥ ಸಂಧಾರಣದ (ಕ್ಯಪಾಸಿಟಿ) ಏಕಮಾನವನ್ನು ಫ್ಯಾರಡ್ ಎಂದು ಕರೆಯುವರು. ಫ್ಯಾರಡೆ ಸೂಚಿಸಿದ ಕಾಂತೀಯ ಮತ್ತು ವಿದ್ಯುತ್ ಬಲರೇಖೆಗಳೆಂಬ ವಿಷಯವನ್ನು ಬಲುಮಟ್ಟಿಗೆ ಅಳವಡಿಸಿಕೊಂಡು ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‍ವೆಲ್, (1831-79) ಕ್ಷೇತ್ರ ಸಮೀಕರಣಗಳನ್ನು ಆವಿಷ್ಕರಿಸಿದ. ಇವು ಆಧುನಿಕ ವಿದ್ಯುತ್ಕಾಂತ ಸಿದ್ಧಾಂತದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.

	ವಿದ್ಯುತ್ಕಾಂತ ಪರಿಣಾಮ ಶೋಧಿಸುವ ಬಳಿಕ ವಿದ್ಯುತ್ತಿನಲ್ಲಿ ಹಲವು ಬಗೆ ಇವೆಯೆಂದು ಸೂಚಿಸಿದ: ಘರ್ಷಣೆಯಿಂದ ವಿದ್ಯುತ್, ಕಾಂತೀಯ ಕಾರಣದಿಂದ ವಿದ್ಯುತ್, ಶಾಖದಿಂದ ವಿದ್ಯುತ್ ಇತ್ಯಾದಿ. ಆದರೆ ಇವೆಲ್ಲ ಮೂಲತಃ ಒಂದೇ ಎಂದು ಇವನ ಅಭಿಪ್ರಾಯವಾಗಿತ್ತು. ಈ ಕಾಲದಲ್ಲೇ ಫ್ಯಾರಡೆ ರಾಸಾಯನಿಕ ವಿಭಜನೆಯ ನಿಯಮಗಳನ್ನು ಶೋಧಿಸಿದ. ಆ್ಯನೋಡ್, ಕ್ಯಾಥೋಡ್, ಆ್ಯನಯಾನ್, ಕ್ಯಾಟಯಾನ್, ಎಲೆಕ್ಟ್ರೋಡ್ ಮುಂತಾದ ಪದಗಳನ್ನು ಬಳಕೆಗೆ ತಂದವನು ಕೂಡ ಇವನೇ.

	ಸಂಶೋಧನೆಯ ಬೆಂಬತ್ತಿದ ಫ್ಯಾರಡೆ ಅವಿಶ್ರಾಂತವಾಗಿ ದುಡಿದ ಪರಿಣಾಮವಾಗಿ ಕೆಲವು ಕಾಲ ಇವನ ಆರೋಗ್ಯ ಕೆಟ್ಟಿತು. ನಿಧಾನವಾಗಿ ಚೇತರಿಸಿಕೊಂಡು 1844ರಲ್ಲಿ ಪುನಃ ತನ್ನ ಸಂಶೋಧನೆಗಳನ್ನು ಮುಂದುವರಿಸಿದ. ಕಾಂತಕ್ಷೇತ್ರದಲ್ಲಿ ಬೆಳಕಿನ ಕಂಪನದ ಸಮತಲ ತಿರುಗುವುದೆಂಬುದನ್ನು ಪತ್ತೆ ಹಚ್ಚಿದ. ಈ ಸಂದರ್ಭದಲ್ಲಿ ಈತ ಹಿಂದೆ ತಯಾರಿಸಿದ್ದ ಭಾರಗಾಜು ಪ್ರಮುಖ ಪಾತ್ರವಹಿಸಿತು. ಗುರುತ್ವಕ್ಕೂ ವಿದ್ಯುತ್ತಿಗೂ ನಿಕಟ ಸಂಬಂಧವಿದೆಯೆಂದು 1850ರಲ್ಲಿ ಪ್ರಯೋಗದಿಂದ ತೋರಿಸಲು ಬಹಳ ಶ್ರಮಿಸಿದ. ಏನೂ ಫಲ ಸಿಕ್ಕಲಿಲ್ಲ.

		ಫ್ಯಾರಡೆ ದಂಪತಿಗಳಿಗೆ ಮಕ್ಕಳಿರಲಿಲ್ಲ. ದೈವಭಕ್ತ ಮತ್ತು ವಿನಯಶೀಲನಾದ ಈತ ಸುಸಂಸ್ಕøತ ವರ್ತನೆಗೆ ಪರ್ಯಾಯನಾಮವಾಗಿದ್ದ. ಕಾರ್ಯನಿಷ್ಠೆ, ಅಚ್ಚುಕಟ್ಟು, ಗುರಿ ತಲುಪುವ ಛಲ ಇವನ ವಿಶಿಷ್ಟ ಗುಣಗಳು. 1858ರಲ್ಲಿ ಇವನು ನಿವೃತ್ತಿ ಹೊಂದಿದ. ಆರೋಗ್ಯವೂ ಸಮರ್ಪಕವಾಗಿರಲಿಲ್ಲ. ದೇಹಶಕ್ತಿ ಕ್ರಮೇಣ ಕುಂದಿ ಮುಂದೆ 1867ರಲ್ಲಿ ನಿಧನನಾದ. 	
(ಆರ್‍ಎ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ